ಸತ್ಯಾಸತ್ಯತೆಯ ಆಧಾರದ ಮೇಲೆ

ಸಾಮಾಜಿಕ ಹೋರಾಟಗಾರರಾದ ವೆರ್ನಾನ್ ಗೊನ್ಸಾಲ್ವಿಸ್ ಮತ್ತು ಅರುಣ್ ಫೆರೇರಾ ಅವರಿಗೆ ಜಾಮೀನು ನೀಡುವ ಸುಪ್ರೀಂ ಕೋರ್ಟ್ ಆದೇಶವು ಕಟ್ಟುನಿಟ್ಟಾದ ಭಯೋತ್ಪಾದನಾ-ವಿರೋಧಿ ಕಾನೂನಿನಡಿ ಸಹ ಜಾಮೀನು ನಿರಾಕರಿಸುವುದು ನಿಯಮವಾಗಬಾರದು ಮತ್ತು ಪ್ರಾಥಮಿಕ ಮೌಲ್ಯಮಾಪನವು ಪೊಲೀಸ್ ಪ್ರಕರಣದ ದೌರ್ಬಲ್ಯಗಳನ್ನು ಬಹಿರಂಗಪಡಿಸಬಹುದು ಎಂಬುದನ್ನು ತೋರಿಸುತ್ತದೆ. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ (ಯುಎಪಿಎ) ಗಂಭೀರ ನಿಬಂಧನೆಗಳಡಿ ಬಂಧಿಸಲ್ಪಟ್ಟವರು ಜಾಮೀನು ಪಡೆಯುವುದು ಕಷ್ಟ. ಸೆಕ್ಷನ್ ೪೩ಡಿ(೫) ಅಡಿ ಆರೋಪವನ್ನು ನಿಜವೆಂದು ನಂಬಲು ಸಮಂಜಸವಾದ ಕಾರಣಗಳಿದ್ದರೆ ಯಾವುದೇ ನ್ಯಾಯಾಲಯವು ಜಾಮೀನು ನೀಡುವುದಿಲ್ಲ. ಇದಲ್ಲದೆ, ೨೦೧೯ರ ಸುಪ್ರೀಂ ಕೋರ್ಟ್ ತೀರ್ಪು ಜಾಮೀನು ಹಂತದಲ್ಲಿ ಸಾಕ್ಷ್ಯಗಳ ವಿವರವಾದ ವಿಶ್ಲೇಷಣೆ ಸಾಧ್ಯವಿಲ್ಲ ಮತ್ತು ಜಾಮೀನನ್ನು ಪ್ರಕರಣದ “ವಿಶಾಲ ಸಂಭವನೀಯತೆಗಳ” ಮೇಲೆ ಮಾತ್ರ ನಿರ್ಧರಿಸಬೇಕು ಎಂದು ಹೇಳುತ್ತದೆ. ಈ ಹಿನ್ನೆಲೆಯಲ್ಲಿ ಇದೀಗ ಸರ್ವೋಚ್ಚ ನ್ಯಾಯಾಲಯವು ಗೊನ್ಸಾಲ್ವಿಸ್ ಮತ್ತು ಫೆರೇರಾ ಅವರಿಗೆ ಪ್ರಕರಣದ ಸತ್ಯಾಸತ್ಯತೆಯ ಆಧಾರದ ಮೇಲೆ ಜಾಮೀನು ನೀಡಿರುವುದು ಗಮನಾರ್ಹವಾಗಿದೆ. ಈ ಆದೇಶದಲ್ಲಿ ಸುಪ್ರೀಂ ಕೋರ್ಟ್ ನಡೆಸಿರುವ ಪ್ರಕರಣದ ವಿಶ್ಲೇಷಣೆ ಸ್ಪಷ್ಟವಾಗಿ ಇದು ಪೊಳ್ಳು ಪ್ರಕರಣ ಎಂದು ಸೂಚಿಸುತ್ತಿದೆ. ಆರೋಪಿಗಳು ಪಿತೂರಿಯ ಭಾಗವಾಗಿದ್ದಾರೆ ಎಂಬುದಕ್ಕೆ ಯಾವುದೇ ನೇರ ಪುರಾವೆಗಳಿಲ್ಲ. ಪೊಲೀಸರು ಉಲ್ಲೇಖಿಸುತ್ತಿರುವ ಪತ್ರಗಳು ಕೇವಲ ಮೂರನೇ ವ್ಯಕ್ತಿಗಳ ನಡುವಿನ ಮಾತುಕತೆಯಾಗಿದ್ದು ಸ್ವತಃ ಈ ಇಬ್ಬರಿಂದ ಏನನ್ನೂ ವಶಪಡಿಸಿಕೊಳ್ಳಲಾಗಿಲ್ಲ ಎಂದು ನ್ಯಾಯಾಲಯವು ಗಮನಿಸಿದೆ. “ಕೇವಲ ಸೆಮಿನಾರ್‌ಗಳಲ್ಲಿ ಭಾಗವಹಿಸುವುದು ೧೯೬೭ರ ಯುಎಪಿಎ ಕಾಯ್ದೆಯಡಿ ಅಪರಾಧವಾಗುವುದಿಲ್ಲ” ಎಂದು ಆದೇಶವು ಸ್ಪಷ್ಟವಾಗಿ ಹೇಳಿದೆ.

೨೦೧೮ ರಲ್ಲಿ ಮಾವೋವಾದಿಗಳ ಪಿತೂರಿಯ ಭಾಗವಾಗಿರುವ ಆರೋಪದ ಮೇಲೆ ಸಾಮಾಜಿಕ ಹೋರಾಟಗಾರರು ಮತ್ತು ವಕೀಲರನ್ನು ಬಂಧಿಸಲಾದ ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಇದೇ ಮೊದಲ ಬಾರಿಗೆ ಆರೋಪಗಳು ನಿಜವಲ್ಲದಿರಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ಪ್ರಕರಣದಲ್ಲಿ ಬಂಧಿತರಾದವರಲ್ಲಿ ವಕೀಲೆ ಸುಧಾ ಭಾರದ್ವಾಜ್ ಅವರ ವಿರುದ್ಧ ಪೊಲೀಸರು ನಿಗದಿತ ಸಮಯದಲ್ಲಿ ಆರೋಪಪಟ್ಟಿ ಸಲ್ಲಿಸಲಿಲ್ಲ ಎಂಬ ನೆಲೆಯಲ್ಲಿ ಜಾಮೀನು ಪಡೆದರೆ, ತೆಲುಗು ಕವಿ ವರವರ ರಾವ್ ಅನಾರೋಗ್ಯದ ಕಾರಣ ಜಾಮೀನು ಪಡೆದರು. ಅವರು ಸಹ-ಆರೋಪಿಯಿಂದ ಹಣ ಪಡೆದಿದ್ದಾರೆ ಎಂದು ಊಹಿಸಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ಬರಹಗಾರ ಮತ್ತು ವಿದ್ವಾಂಸ ಆನಂದ್ ತೇಲ್ತುಂಬ್ಡೆ ಅವರನ್ನು ಬಿಡುಗಡೆ ಮಾಡಿತು. ಫಾದರ್ ಸ್ಟಾನ್ ಸ್ವಾಮಿ ಜೈಲಿನಲ್ಲೇ ನಿಧನರಾದರು. ಇತ್ತೀಚಿನ ಆದೇಶದಲ್ಲಿ, ಇಬ್ಬರು ನ್ಯಾಯಾಧೀಶರ ಪೀಠವು ಗೊನ್ಸಾಲ್ವಿಸ್ ಮತ್ತು ಫೆರೇರಾ ಅವರು ಭಯೋತ್ಪಾದಕ ಕೃತ್ಯಗಳನ್ನು ಎಸಗಲು ಪಿತೂರಿಯ ಭಾಗವಾಗಿದ್ದರು ಎಂದು ಹೇಳಲು ಎನ್‌ಐಎ ಅವಲಂಬಿಸಿರುವ ಪತ್ರಗಳು ಮತ್ತು ಸಾಕ್ಷಿ ಹೇಳಿಕೆಗಳು ದುರ್ಬಲವಾದವು ಎಂದು ಹೇಳಿದೆ. ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ನಿನ ಅನೇಕ ಬೀಸು ಹೇಳಿಕೆಗಳು ನ್ಯಾಯಾಂಗ ಪರಿಶೀಲನೆಯಡಿ ಬಿದ್ದು ಹೋಗುತ್ತಿರುವುದು ಆಶ್ಚರ್ಯವೇನಲ್ಲ. ಆರೋಪಿಗಳು ಬಳಸಿದ ಕಂಪ್ಯೂಟರ್‌ಗಳಲ್ಲಿ ಕೆಲವು ಪುರಾವೆಗಳನ್ನು ಅವರಿಗರಿವಿಲ್ಲದೆ ಸೇರಿಸಲಾಗಿದೆ ಎಂಬ ವರದಿಗಳೂ ಇವೆ. ಈ ಇಡೀ ಪ್ರಕರಣದ ಸಮಗ್ರ ಮೌಲ್ಯಮಾಪನಕ್ಕೆ ಇದು ಸೂಕ್ತ ಸಮಯ.